ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನ ಸಮಗ್ರ ರಂಗಭೂಮಿ ಕಲೆ

ಲೇಖಕರು :
ಕೆರೆಮನೆ ಶಿವಾನ೦ದ ಹೆಗಡೆ
ಶನಿವಾರ, ಸೆಪ್ಟೆ೦ಬರ್ 5 , 2015

ಹೀಗೆಂದು ಬಹುತೇಕರು ಯಕ್ಷಗಾನವನ್ನು ವ್ಯಾಖ್ಯಾನಿಸುವುದಿದೆ. ಗಂಡುಕಲೆ ಎಂದರೇನು? ಯಾಕೆ ಇಂತಹದೊಂದು ವಿಶೇಷಣದಿಂದ ಯಕ್ಷಗಾನವನ್ನು ಕರೆಯುತ್ತಾರೆ ಎಂದು ಚಿಂತಿಸಬೇಕಾಗಿದೆ. ಒಂದು ಕಲಾಪ್ರಕಾರವನ್ನ ಗಂಡು, ಹೆಣ್ಣು ಎಂದು ವಿಭಾಗಿಸಬಹುದೆ? ವಿಭಾಗಿಸಲು ಸಾಧ್ಯವೆ ಮತ್ತು ಸಾಧುವೆ ಎಂದು ಪ್ರಶ್ನಿಸಿಕೊಂಡರೆ ದಾರಿ ಸಿಗಬಹುದೆ?. ಯಕ್ಷಗಾನ ಎಂಬ ಕಲೆ ಕೇವಲ ವೀರರಸ ಪ್ರಧಾನ ಎಂಬ ಕಾರಣಕ್ಕೆ ಮತ್ತು ಚೆಂಡೆ, ಮದ್ದಲೆ ತಾಡನ ವಿದಾನ, ಏರು ಶ್ರುತಿಯಲ್ಲಿ ಮಾತಾಡುವುದು ಇದನ್ನೆಲ್ಲ ಲೆಕ್ಕಕ್ಕೆ ಹಿಡಿದು ನಾವು ಇದನ್ನ ಗಂಡುಕಲೆ ಎಂದು ಕರೆಯುತ್ತಿದ್ದೇವೆಯೋ?

ಇದು ಬಹುತೇಕ ಹೌದು ಎನ್ನಬಹುದು. 'ಆಟಕ್ಕೆ ಅಬ್ಬರ, ತೋಟಕ್ಕೆ ಗೊಬ್ಬರ' ಎಂಬ ಒಂದು ಗಾದೆ ಇದೆಯಲ್ಲ ಇದೂ ಅದನ್ನೇ ಪೋಷಿಸುತ್ತದೆ. ಯಕ್ಷಗಾನ ಎಂದರೆ ಅಬ್ಬರ, ಅಟ್ಟಹಾಸ ಇವುಗಳೇ ಮೆರೆಯಬೇಕು ಎಂಬ ಕಲ್ಪನೆಯಲ್ಲಿ ಇದನ್ನ ಗಂಡುಕಲೆ ಎಂದು ಗುರುತಿಸುತ್ತಿದ್ದಾರೆ ಎನ್ನಬಹುದು. ಆದರೆ ಯಕ್ಷಗಾನದ ಶಕ್ತಿ ಸಾಧ್ಯತೆಯ ವಿರಾಟ ರೂಪವನ್ನ ತೆರೆದಿಟ್ಟಾಗ ಅಥವಾ ಅರ್ಥವಿಸಿಕೊಂಡಾಗ ಈ ರಂಗಭೂಮಿ ಯಾವುದೋ ಒಂದು ರಸಾಭಿವ್ಯಕ್ತಿಗೆ ಮಾತ್ರ ಮಾರಾಟವಾಗಲಾರದು ಎಂಬ ಅರಿವು ಬರುವುದು ಸಹಜ.

ಯಕ್ಷಗಾನ ಸಮಗ್ರ ರಂಗಭೂಮಿ ಕಲೆ

ಯಕ್ಷಗಾನವನ್ನು ಗಂಡುಕಲೆ ಎನ್ನುವುದಕ್ಕಿಂತ ಸಮಗ್ರ ಕಲೆ/ರಂಗಭೂಮಿ ಎನ್ನಬೇಕು. ಬರೀ ಅಬ್ಬರವೇ ನಮ್ಮ ಯಕ್ಷಗಾನದ ಜೀವಾಳ ಎಂದು ಅಥವಾ ಬೊಬ್ಬೆಯೇ ಈ ಕಲೆಯ ಲಕ್ಷಣ ಎಂದೋ ಬಿಂಬಿಸಿಕೊಂಡರೆ, ಉಳಿದ ರಸಭಾವಗಳು ಕಾಲಕ್ರಮೇಣ ಈ ರಂಗಭೂಮಿಯಿಂದ ದೂರಸರಿಯಬಹುದು. ಒಂದಿಷ್ಟು ಶಕ್ತಿ ವ್ಯಯವೇ ಪ್ರದಾನವಾದೀತು. ಕಲೆ ಜನಜೀವನದ ಆಗುಹೋಗನ್ನು ಪ್ರತಿನಿಧಿಸುತ್ತ, ಜನ ಸಮುದಾಯವನ್ನು ಬೆಳೆಸಲು, ಅವರ ಬೌದ್ಧಿಕ ಮಟ್ಟವನ್ನು ಎತ್ತರಿಸಲು ಸಹಕಾರಿಯಾದಾಗ ಅದು ನಮ್ಮ ಜೀವನದ ಅನಿವಾರ್ಯ ಅಂಗವಾಗುತ್ತದೆ. ಹಾಗೂ ಜನಜೀವನದ ಸಮಸ್ಯೆ ಸಂತೋಷಗಳನ್ನ ರಂಗಭೂಮಿ ತನ್ನ ಚೌಕಟ್ಟಿನೊಳಗೆ ಹೊರಹೊಮ್ಮಿಸಲು ಪ್ರಯತ್ನಿಸುತ್ತ ಜನ ಸಮುದಾಯದ ಆಶೋತ್ತರದ ಪ್ರತೀಕವಾಗಿ ಬೆಳೆಯುತ್ತದೆ. ಇದು ಕಲೆಯ ಅಂತಿಮ ಲಕ್ಷವೂ ಹೌದು.

ಭರತನ ನಾಟ್ಯಶಾಸ್ತ್ರವೋ ಅಥವಾ ನಮ್ಮ ಭಾರತೀಯ ರಂಗಭೂಮಿಯ ಲಕ್ಷಣಗಳನ್ನ ಅವಲೋಕಿಸಿದಾಗ ಅಭಿಜಾತ ಕಲಾ ಪ್ರಕಾರ ಎನಿಸಿದ ಯಕ್ಷಗಾನದಂತಹ ರಂಗಭೂಮಿಯುಲ್ಲಿ ಭಾವ ಪ್ರಕಟಣೆ ಅಥವಾ ಭಾವಚೋದನೆಯನ್ನು ದುಡಿಸಿಕೊಳ್ಳುವಲ್ಲಿ ಅಪಾರ ಸಾಧ್ಯತೆಗಳು ಸಹಜವಾಗಿಯೇ ಇವೆ. ನಮ್ಮ ಯಕ್ಷಗಾನ ಒಂದು ಕಾಲದಲ್ಲಿ ಹೆಚ್ಚು ಕಾಳಗ ಕಲ್ಯಾಣದ ಅಬ್ಬರದ ಅಭಿವ್ಯಕ್ತಿಯೇ ಪ್ರದಾನವಾಗಿದ್ದಿರಬಹುದಾದರೂ, ಅಂತಹ ಪ್ರಸಂಗಗಳು ಹೆಚ್ಚು ಪ್ರದರ್ಶನವಾಗುತ್ತಿತ್ತು ಎನ್ನುವ ಕಾರಣವೊಂದೇ ಈ ರಂಗಭೂಮಿಯ ಅಳತೆಗೋಲಾಗಬೇಕಾಗಿಲ್ಲ.

ವೀರಾದ್ಭುತ ರಸವಲ್ಲದೇ, ಕರುಣ, ಹಾಸ್ಯ ಶೃಂಗಾರ (ಸತ್ಯಹರಿಶ್ಚಂದ್ರ, ಕರ್ಣ ಪರ್ವ, ರುಕ್ಮಾಂಗದ ಚರಿತ್ರೆ, ಕೃಷ್ಣ ಸಂಧಾನ ಮುಂತಾದ) ಪ್ರಸಂಗಗಳಿಗೂ ಯಕ್ಷಗಾನ ಬಹು ಹಿಂದಿನಿಂದಲೇ ಸ್ಥಾನಕೊಟ್ಟಿದೆ. ಭರತ ಹೇಳಿದ ನಾಲ್ಕು ಪ್ರಮುಖ ರಂಗಾಭಿವ್ಯಕ್ತಿ ವಿಧಾನವಾದ ಭಾರತೀ, ಸಾತ್ಪತೀ, ಆರಭಟಿ ಮತ್ತು ಕೈಶಿಕಿ ಈ ಎಲ್ಲ ವೃತ್ತಿಗಳ ಮೂಲಕ ರಂಗಕೃತಿಯನ್ನು ಹೊರತರುವ ಯಕ್ಷಗಾನ ನವರಸಗಳನ್ನೂ ಅಭಿನಯಿಸುವ ಸಾಮರ್ಥ್ಯ ಹೊಂದಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಆಟಕ್ಕೆ ಅಬ್ಬರ ಮಾತ್ರ ಸಾಲದು

ಆಂಗಿಕ,ಸಾತ್ವಿಕ,ಆಹಾರ್ಯ, ವಾಚಿಕಾಬಿನಯದ ನಾಲ್ಕೂ ಪ್ರಮುಖ ಅಂಗಗಳನ್ನ ದುಡಿಸಿಕೊಂಡು ಇಡೀ ಭಾರತಿಯ ರಂಗಸಂಪ್ರದಾಯದ ಪ್ರತಿನಿದಿಯಂತಿರುವ ಯಕ್ಷಗಾನ, ಕೇವಲ ವೀರ, ರೌದ್ರ, ಭಯನಕ ರಸಪ್ರದಾನಮಾತ್ರವಲ್ಲದೇ ಅನ್ಯ ರಸಭಾವಗಳ ಸೂಕ್ಷ್ಮ ಅಭಿವ್ಯಕ್ತಿಯನ್ನ ತನ್ನ ಶರೀರ ಮತ್ತು ಶಾರೀರದಿಂದಲೇ ಸಾಧಿಸುವ ಅಂಶಗಳಿಂದ ಅಡಕವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಕೆಲವು ಪ್ರದೇಶದಲ್ಲಿ ಹೇಗಿದೆಯೆಂದರೆ, 'ನಮ್ಮಲ್ಲಿ ಆಟಕ್ಕೆ ಆದಷ್ಟು ಅಬ್ಬರ ಇರಬೇಕು', ಎಂದು ಬೇಡಿಕೆ ಇಡುವವರು ಇದ್ದಾರೆ. ಪ್ರಂಗದಲ್ಲಿ ಅಬ್ಬರ ಇದ್ದರೆ ಅದನ್ನು ಚೆನ್ನ್ನಾಗಿ ತರುವ, ಸನ್ನಿವೇಶವನ್ನ ಚೆನ್ನಾಗಿ ದುಡಿಸಿಕೊಳ್ಳುವ ಕುರಿತು ಪ್ರಯತ್ನಿಸಬಹುದು, ಆದರೆ ಅಬ್ಬರವೇ ಪ್ರಸಂಗದ ಅಳತೆಗೋಲಾದರೆ, ಇಡೀ ಆಖ್ಯಾನವೇ ಅಬ್ಬರವೊಂದಕ್ಕೆ ಮಾತ್ರ ಮಣ್ಣಣೆ ಮಹತ್ವ ನೀಡಿ ಕುಳಿತುಬಿಟ್ಟರೆ. ??. . . .ಆಗ ಯಕ್ಷಗಾನದ ವಿರಾಟ್ ಶಕ್ತಿಯ ಸದ್ಬಳಕೆಯನ್ನ ದೂರ ಇಟ್ಟಂತಾಗುತ್ತದೆ. ದೋಣಿ ಆಗಬೇಕಾದದ್ದು ಹುಟ್ಟ್ರು ಮಾಡಿಕೊಂಡಂತೆ ಆಗದೇ?

'ಗಂಡು' ಎಂದರೆ ಶ್ರೇಷ್ಠ ಎಂಬ ಅರ್ಥವೂ ಇದೆ. ಆ ಶಬ್ಧ ಹೆಚ್ಚು ಲಿಂಗವನ್ನೇ ಪ್ರತಿನಿದಿಸುವುದರಿಂದ 'ಗಂಡು ಕಲೆ' ಎಂದು ಕರೆಯುವುದಕ್ಕಿಂತ ನಮ್ಮ ಯಕ್ಷಗಾನ 'ಸಮಗ್ರ ರಂಗಭೂಮಿ' (Total Theatre) ಎಂಬ ನಾಮದೇಯವೇ ಹೆಚ್ಚು ಅರ್ಥಪೂರ್ಣವೂ ಸೂಕ್ತವೂ ಆಗಬಹುದು.

*********************


ಕೃಪೆ : ಕಣಿಪುರ ಮಾಸಪತ್ರಿಕೆಯಲ್ಲಿ ಪ್ರಕಟಗೊ೦ಡ ಲೇಖನವನ್ನು ಯಥಾವತ್ತಾಗಿ ಲೇಖಕರ ಅನುಮತಿಯೊ೦ದಿಗೆ ಪ್ರಕಟಿಸಲಾಗಿದೆ


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ